ಅರ್ವಿಂಗ್, ವಾಷಿಂಗ್‍ಟನ್
(1783-1859). ವಿಶ್ವವಿಖ್ಯಾತರಾದ ಅಮೆರಿಕದ ಮೊದಲ ಸಾಹಿತಿಗಳಲ್ಲೊಬ್ಬ, ಕಾದಂಬರಿಕಾರ. ಜನನ ನ್ಯೂಯಾರ್ಕ್‍ನಲ್ಲಿ. ಅಣ್ಣ ಪೀಟರ್ ಸಂಪಾದಕನಾಗಿದ್ದ ಕ್ರಾನಿಕಲ್ ಪತ್ರಿಕೆಗೆ ನ್ಯೂಯಾರ್ಕ್ ಜನಜೀವನವನ್ನು ಕುರಿತು ವಿಡಂಬನೆಗಳನ್ನು ಬರೆದ (1802-03). ವಕೀಲವೃತ್ತಿ ಬಿಟ್ಟು ಸಾಹಿತ್ಯರಚನಗೆ ತೊಡಗಿ ವಿಲಿಯಂ ಅರ್ವಿಂಗ್, ಜೇಮ್ಸ್ ಕೆ. ಪಾಡ್ಲಿಂಗರೊಡನೆ ಸೇರಿ ಸಲ್ಮಗುಂಡಿ (1807-08) ಲೇಖನಮಾಲೆಯನ್ನೂ ನಿಕರ್ ಬಾಕರ್ ಎಂಬ ಸಾಹಿತ್ಯ ನಾಮದಿಂದ ಹಿಸ್ಟರಿ ಆಫ್ ನ್ಯೂಯಾರ್ಕ್(1809) ಎಂಬ ಹಾಸ್ಯ ಗ್ರಂಥವನ್ನೂ ರಚಿಸಿದ. ಲಿವರ್‍ಪೂಲ್‍ನಲ್ಲಿದ್ದ ತಮ್ಮ ಕುಟುಂಬದ ವ್ಯಾಪಾರ ಶಾಖೆಯನ್ನು ನೋಡಿಕೊಳ್ಳಲು ಅಲ್ಲಿಗೆ ಹೋದರೂ ವ್ಯಾಪಾರದಲ್ಲಿ ನಷ್ಟವಾದ್ದರಿಂದ ಜೀವನಕ್ಕಾಗಿ ಬರೆಹವನ್ನೇ ಅವಲಂಬಿಸಿದ. ದಿ ಸ್ಕೆಚ್ ಬುಕ್ ಆಫ್ ಜೊಫ್ರೆ ಕ್ರಯಾನ್ (1819-20) ಎಂಬ ಪ್ರಬಂಧ ಮತ್ತು ಸಣ್ಣಕಥೆಗಳ ಸಂಗ್ರಹವೂ ಬೇಸ್ ಬ್ರಿಜ್ ಹಾಲ್ (1822) ಎಂಬ ಕೃತಿಯೂ ಅವನಿಗೆ ಪ್ರಸಿದ್ಧಿ ತಂದುವು. ಟೇಲ್ಸ್ ಆಫ್ ಎ ಟ್ರ್ಯಾವಲರ್ (1824) ವಿಪರೀತ ಟೀಕೆಗೊಳಗಾಯಿತು. 1826ರಿಂದ ಮೂರು ವರ್ಷ ಸ್ಪೇನಿನ ರಾಯಭಾರಿ ವರ್ಗದಲ್ಲಿದ್ದು ಕೊಲಂಬಸ್ಸನ ಜೀವನಚರಿತ್ರೆ (1828), ದಿ ಕಾಂಕ್ಟೆಸ್ಟ್ ಆಫ್ ಗ್ರಾನಡಾ (1829) ಮತ್ತು ದಿ ಅಲ್‍ಹಾಂಬ್ರ (1832) ಗ್ರಂಥಗಳನ್ನು ಬರೆದ. ಐದು ಸಂಪುಟಗಳ ಲೈಫ್ ಆಫ್ ವಾಷಿಂಗ್‍ಟನ್ (1855-59) ಎಂಬುದು ಈತನ ಬಗ್ಗೆ ಇರುವ ಉತ್ತಮ ಜೀವನಚರಿತ್ರೆ. 									
(ಎನ್.ಎಸ್.ಎಲ್.ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ